ಚುರಮರಿ ಶೇಷಗಿರಿರಾಯರು ೧೮೨೭ರಲ್ಲಿ ಧಾರವಾಡದಲ್ಲಿ ಜನಿಸಿದರು. ಇವರ ತಂದೆ ರಾಮರಾಯರು. == ಶಿಕ್ಷಣ == ಶೇಷಗಿರಿರಾಯರ ಪ್ರಾಥಮಿಕ ಶಿಕ್ಷಣ ಧಾರವಾಡದಲ್ಲಿ ಆಯಿತು. ಆ ಬಳಿಕ ಪುಣೆಗೆ ಹೋಗಿ ಮಾಧ್ಯಮಿಕ ಶಿಕ್ಷಣ ಮುಗಿಸಿ, ಇಂಜನಿಯರಿಂಗ ಕಾಲೇಜು ಸೇರಿದರು. == ಉದ್ಯೋಗ == ಕಾಲೇಜು ಶಿಕ್ಷಣ ಮುಗಿಸುತ್ತಿದ್ದಂತೆ, ಮುಂಬಯಿ ಸರಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಓವರ್ಸಿಯರ್ ಹುದ್ದೆಯಲ್ಲಿ ವೃತ್ತಿಜೀವನ ಪ್ರಾರಂಭಿಸಿದರು. ಮುಂಬಯಿ ಪ್ರಾಂತ ಆ ಕಾಲದಲ್ಲಿ ಬಹಳ ದೊಡ್ಡದಾಗಿತ್ತು. ಶೇಷಗಿರಿರಾಯರು ಮುಂಬಯಿ ಹಾಗು ಸಿಂಧಗಳಲ್ಲಿ ಕೆಲಸ ಮಾಡಿ ಹಾವೇರಿ ಜಿಲ್ಲೆಯ ಮದಗ ಮಾಸೂರ ಕೆರೆಯ ಜೀರ್ಣೋದ್ಧಾರ ಕೆಲಸಕ್ಕಾಗಿ ಈ ಭಾಗಕ್ಕೆ ಬಂದರು. == ಸಾಹಿತ್ಯ == ಡೆಪ್ಯೂಟಿ ಚೆನ್ನಬಸಪ್ಪನವರು ಹಾಗು ಚುರಮರಿ ಶೇಷಗಿರಿರಾಯರು ಆಪ್ತಮಿತ್ರರು.ಚೆನ್ನಬಸಪ್ಪನವರ ಒತ್ತಾಯದಿಂದಾಗಿ ಶೇಷಗಿರಿರಾಯರು ಕಾಳಿದಾಸನ ‘ಅಭಿಜ್ಞಾನ ಶಾಕುಂತಲಮ್’ ನಾಟಕವನ್ನು ಕನ್ನಡದಲ್ಲಿ ಅನುವಾದಿಸಿ, ಉಚಿತ ಸ್ಥಳಗಳಲ್ಲಿ ಗೀತಗಳನ್ನು ಕೂಡಿಸಿ, ರಂಗಪ್ರಯೋಗಕ್ಕೆ ಯೋಗ್ಯವನ್ನಾಗಿ ಮಾಡಿದ್ದರು. ಆದರೆ ೧೮೭೦ರಲ್ಲಿ ರಚಿಸಲಾದ ಈ ನಾಟಕ ೧೮೯೧ ಅಥವಾ ೧೮೯೩ರಲ್ಲಿ ಬಾದಾಮಿಯಲ್ಲಿ ಪ್ರಯೋಗಿಸಲ್ಪಟ್ಟಿತು. ಆ ಬಳಿಕ ೧೯೦೫ರಲ್ಲಿ ಧಾರವಾಡದಲ್ಲಿ ಭಾರತ ಕಲೋತ್ತೇಜಕ ಸಂಘದವರಿಂದ ಪ್ರಯೋಗಗೊಂಡಿತು. ಇವರ ಕೃತಿಗಳು: ಶಾಕುಂತಲ (೧೮೭೦) ಮೃಚ್ಛಕಟಿಕ ಸುಂದರಾ ಜೈಮಿನಿ ಭಾರತದ ಮರಾಠಿ ಅನುವಾದ ಬಹಿರ್ಲಾಪಿಕಾ ಹಾಗು ಇತರ ಕವನಗಳು ೧೮೯೪ರಲ್ಲಿ ಶೇಷಗಿರಿರಾಯ ಚುರಮರಿ ತಮ್ಮ ಮನೆಯಲ್ಲಿಯೆ ವೈಜ್ಞಾನಿಕ ಪ್ರಯೋಗವೊಂದನ್ನು ಮಾಡುತ್ತಿದ್ದಾಗ, ಸೀಸೆ ಒಡೆದು, ವಿಷವಾಯುವಿನ ಸೇವನೆಯಿಂದ ಮೃತರಾದರು.